ಇತಿಹಾಸ ಪ್ರಸಿದ್ಧ ಶಿವಗಂಗೆ ಬೆಟ್ಟ ಪರಿಚಯ

ಶಿವಗಂಗೆಯನ್ನು ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೋಕಿನ ಗಡಿಭಾಗದಲ್ಲಿದೆ ಶಿವಗಂಗೆ ಬೆಟ್ಟ.

ಬೆಂಗಳೂರಿನಿಂದ 58ಕಿಲೋ ಮೀಟರ್ ದೂರವಿದೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ನೆಲಮಂಗಲದ ಮೇಲೆ ಹಾದು ಡಾಬಸ್’ಪೇಟೆ ತಲುಪಿ ಅಲ್ಲಿಂದ ಎಡಗಡೆ ತಿರುಗಿ ಅಲ್ಲಿಂದ ಮತ್ತೆ 8 ಕೀಲೋ ಮೀಟರ್ ಹಸಿರು ಸಿರಿಯಲ್ಲಿ ಮುಂದೆ ಸಾಗಿದರೆ ನಿಮಗೆ ಶಿವಗಂಗೆ ಬೆಟ್ಟದ ದರ್ಶನವಾಗುತ್ತದೆ.

ತುಮಕೂರಿನಿಂದ 26 ಕಿಲೋಮೀಟರ್ ಇದೆ. ಕುಮುದ್ವತಿ ನದಿಯು ಹುಟ್ಟುವುದು ಇದೆ ಶಿವಗಂಗೆಯಲ್ಲಿ ಎಂಬುದು ಈ ಬೆಟ್ಟದ ಹಿರಿಮೆಗಳಲ್ಲೊಂದು, ಈ ಕುಮುದ್ವತಿ ನದಿಯು ಅರ್ಕಾವತಿ ನದಿಯ ಉಪನದಿಯಾಗಿದೆ. ಇದೆ ಬೆಟ್ಟದಲ್ಲಿ ಕುಮುದ್ವತಿ ನದಿಯು ಹುಟ್ಟುವುದು ಇದು ಅರ್ಕಾವತಿ ನದಿಯ ಉಪನದಿಯಾಗಿದೆ.

ಶಿವಗಂಗೆ ಬೆಟ್ಟ Shivagange Bangalore Karnataka
ಶಿವಗಂಗೆ ಬೆಟ್ಟ Shivagange Bangalore Karnataka

ವೀರಭದ್ರೇಶ್ವರ, ಹೊನ್ನಾದೇವಿ, ಗಂಗಾಂಧರೇಶ್ವರ, ಬಸವ(ನಂದಿ), ತುಪ್ಪವನ್ನು ಬೆಣ್ಣೆಯಾಗಿ ಪರಿವರ್ತಿಸುವ ಶಿವಲಿಂಗ, ಪಾತಾಳಗಂಗೆ, ಒಳಕಲ್ಲು ತೀರ್ಥ, ಒಳಕಲ್ಲು ತೀರ್ಥಕ್ಕೆ ಹೋಗುವ ಗುಹೆ, ಕೆಂಪೇಗೌಡರು ನಿರ್ಮಾಣಮಾಡಿರುವ ದೇವಸ್ಥಾನದ ಶಿಲ್ಪಕಲೆ, ಆದಿಶಂಕರಾಚಾರ್ಯರ ಮೂರ್ತಿ, ಕೆಂಪೇಗೌಡರ ಸುರಂಗ ಮಾರ್ಗ(ಬೆಂಗಳೂರಿನ ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಮತ್ತು ಹುತ್ರಿದುರ್ಗಕ್ಕೂ ಸಂಪರ್ಕವಿರುವ ರಹಸ್ಯ ಮಾರ್ಗ), ಕಳುವಾದ ಚಿನ್ನದ ಗಂಟೆಯ ಬದಲಾಗಿ ಬೆಳ್ಳಿ ಗಂಟೆಯ ಬಂಡೆ, ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳು, 5 ವಿವಿಧ ಜನಾಂಗದ ಮಠಗಳು, ಶಾಂತಲಾ ಡ್ರಾಪ್(ವಿಷ್ಣುವರ್ಧನನ ಪಟ್ಟದರಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಳ) ಇಲ್ಲಿನ ಪ್ರಮುಖ ಆಕರ್ಷಣೆಗಳು ಬನ್ನಿ ಇದರ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೊಣ.

ಶಿವಗಂಗೆಬೆಟ್ಟದ ಬಗ್ಗೆ ಮಾಹಿತಿ

ಸಮುದ್ರ ಮಟ್ಟದಿಂದ 1380ಮೀಟರ್ ಅಂದರೆ 4 ,547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ ದಿಕ್ಕಿನ ಕಡೆಯಿದೆ, ತುಮಕೂರಿನಿಂದ ಪೂರ್ವ ದಿಕ್ಕಿಗೆ ಇದೆ. ನೋಡಲು ಇದು ಶಂಖಾಕೃತಿಯ ಬೆಟ್ಟ ವಾಗಿದ್ದು. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ ಹಾಗೂ ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯನ್ನೂ ಪಡೆದಿದೆ.

ಪ್ರತಿ ವರ್ಷವು ಮಕರ ಸಂಕ್ರಾತಿಯ ಹಬ್ಬದ ದಿನದಂದೆ ಇಲ್ಲಿ ಜಾತ್ರೆ ನಡೆಯುತ್ತದೆ ಇದನ್ನು ಶಿವಗಂಗೆ ಜಾತ್ರೆ ಅಥವಾ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು(ಬೆಂಗಳೂರಿನಲ್ಲಿಯೂ ಸಹ ಪ್ರಸಿದ್ಧ ಗವಿಗಂಗಾಧರೇಶ್ವರನ ದೇವಾಸ್ಥಾನವಿರುವುದರಿಂದ ಶಿವಗಂಗೆ ಗಂಗಾಧರೇಶ್ವರನ ಜಾತ್ರೆ ಎನ್ನುವರು).
ಇದು ವರ್ಷವಿಡೀ ಜಲಧಾರೆಯನ್ನು ಹೊಂದಿರುವ ಅದ್ಭುತ ಬೆಟ್ಟ. ಇಲ್ಲಿರುವ ರಹಸ್ಯ ಸುರಂಗ ಮಾರ್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದು ಹಾಗೂ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯಕ್ಕೂ ನೇರ ಸಂಪರ್ಕವಿದೆ ಆದರೆ ಇದು ಇಂದು ಶೀತಲವ್ಯಸ್ಥೆಯಲ್ಲಿದ್ದು ಮುಚ್ಚಿಹೋಗಿದೆ(ಭಕ್ತಾಧಿಗಳು ಸುರಂಗದೊಳಗೆ ಪ್ರವೇಶಿಸುವುದು ನಿಷೇಧಿಸಲಾಗಿದೆ, ಕಾರಣ ಉಸಿರಾಟದ ತೊಂದರೆಯಾಗಿ ಸಾವು ಸಂಭವಿಸಬಹುದು). 

ಈ ಬೆಟ್ಟದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು, ಅದು ಒಳಕಲ್ಲಿನ ಆಕೃತಿಯಲ್ಲಿದೆ ಆದ್ದರಿಂದ ಇದನ್ನು ಒಳಕಲ್ಲು ತೀರ್ಥ ಎಂದು ಪ್ರಸಿದ್ಧಿ ಪಡೆದಿದೆ, ಶಿವಗಂಗೆ ಬೆಟ್ಟಕ್ಕೆ ಯಾರೇ ಬಂದರು ಬೆಟ್ಟದ ತುತ್ತ ತುದಿಯ ಸುತ್ತುವ ಬಸವ ಇರುವಲ್ಲಿಗೆ ಹತ್ತಲಾಗದಿದ್ದವರು ಸಹ ಬೆಟ್ಟದ ಮಧ್ಯ ಭಾಗದಲ್ಲಿರುವ ಒಳಕಲ್ಲು ತೀರ್ಥಕ್ಕೆ ಭೇಟಿನೀಡಿ ಒಳಕಲ್ಲಿನ ಒಳಗೆ ಕೈಹಾಕಿ ಅದೃಷ್ಟ ಪರೀಕ್ಷಿಸುವರು ಅಥವಾ ಬೇಡಿದ ಕಾರ್ಯ ಇಡೇರುವುದೋ ಇಲ್ಲವೋ ಎಂದು ತಿಳಿದುಕೊಳ್ಳುವರು. ನೀರು ಸಿಕ್ಕಿದರೆ ಬೇಡಿದ ಕಾರ್ಯ ಇಡೇರುವುದೆಂದು ಸಿಗದಿದ್ದರೆ ಬೇಡಿದ ಕಾರ್ಯ ಇಡೇರುವುದಿಲ್ಲವೆಂದು ತಿಳಿಯುವರು.

ಒಳಕಲ್ಲು ತೀರ್ಥವೇ ಈ ಸ್ಥಳದ ಪ್ರಮುಖ ಆಕರ್ಷಣೆ.

ಜನರ ಆಡುಭಾಷೆಯಲ್ಲಿ ಒಳಕಲ್ಲು ತೀರ್ಥ ಎಂದು ಪ್ರಸಿದ್ಧಿಯಾಗಿದೆ, ಒಳಕಲ್ಲು ತೀರ್ಥವನ್ನು ಜಗದ್ಗುರು ರೇವಣಸಿದ್ಧೇಶ್ವರರಿಂದ ಉತ್ಪತ್ತಿಯಾಗಿರುವ ತೀರ್ಥ ಎನ್ನುವರು. ಜಗದ್ಗುರು ರೇವಣಸಿದ್ಧೇಶ್ವರರು ತಪಸ್ಸುಗೈದಿದ್ದು ಇದೆ ಶಿವಗಂಗೆಯಲ್ಲಿ, ಹಾಗೆಯೇ ಅಗಸ್ಱರಿಗೆ ದೀಕ್ಷೆ ನೀಡಲು ಜಲ ಪ್ರೋಕ್ಷಣೆಯ ಅಗತ್ಯವಿದ್ದಾಗ ತಮ್ಮ ಕೈಯಲ್ಲಿದ್ದ ದಂಡದಿಂದ ಕಲ್ಲನ್ನು ಗುದ್ದಿ ಗಂಗೆಯನ್ನು ಹೊರತಂದಿದ್ದಾರೆ. ಹಾಗೆಯೇ ಜಗದ್ಗುರು ರುದ್ರಮುನೀಶ್ವರರ ಜನ್ಮವತಾರವಾಗಿದ್ದು ಸಹ ಇದೇ ಶಿವಗಂಗೆಯಲ್ಲಿ ಎನ್ನುವರು. ಈ ಎಲ್ಲ ಅಂಶಗಳಿಗೆ ಪೂರಕವೆಂಬಂತೆ ಜಗದ್ಗುರು ರೇವಣಸಿದ್ಧೇಶ್ವರ ಪರಂಪರೆಯ ಹಲವು ಕುರುಹುಗಳು ಇಲ್ಲಿವೆ..ಅರ್ಧಬೆಟ್ಟವನ್ನು ಹತ್ತಿದರೆ ಗುಹೆ ಸಿಗುತ್ತದೆ ಒಳಗೆ ಪ್ರವೇಶಿಸಲು 5 ರುಪಾಯಿಯ ಚೀಟಿ ಪಡೆಯಬೇಕು ಒಳಗೆ ಪ್ರವೇಶಿಸಿ ಒಳಕಲ್ಲು ತೀರ್ಥಕ್ಕೆ ತೆವಳುತ್ತ ಬಗ್ಗಿ ಸಾಗಬೇಕು.

ವರ್ಷದ 365ದಿನಗಳು ಈ ಒಳಕಲ್ಲಿನಲ್ಲಿ ನೀರು ಬತ್ತುವುದಿಲ್ಲ. ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದ್ದು , ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ .

ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ ಹಾಗೂ ಮದ್ಯಾಹ್ನ 12 ಘಂಟೆಯಿಂದ 3 ಘಂಟೆಯ ವರೆಗೂ ಅನ್ನ ದಾಸೋಹವು ನಡೆಯುತ್ತದೆ. ಇನ್ನೋಂದು ಅಚ್ಚರಿ ಏನೆಂದರೆ ಬೆಟ್ಟದ ಮೇಲಿರುವ ದೇವಾಲಯದಲ್ಲಿರುವ ಶಿವನ ರೂಪವಾದ ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಬೆಟ್ಟದ ಶಿವಲಿಂಗದ(ಗಂಗಾಧರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ್ವತಿ ದೇವಸ್ಥಾನ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆ ಇದ್ದ ಗುಹೆಯಿದೆ.
ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ಥಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ , ಕಲ್ಯಾಣ ಮಂಟಪ , ಸಪ್ತ ಮಾತೃಕೆ , ನವಗ್ರಹ ವಿಗ್ರಹಗಳಿವೆ. 

ಇದಲ್ಲದೆ ಕೆಂಪೆಗೌಡರು ಶಿವಗಂಗೆಯ ಗಂಗಾಧರೇಶ್ವರನ ಪರಮ ಭಕ್ತನಾಗಿದ್ದನು. ಆ ದೇಗುಲವನ್ನು ಅವರು ಒಂದು ನ್ಯಾಯಾಸ್ಥಾನ ಎಂದು ಪರಿಗಣಿಸಿದ ಬಗ್ಗೆ ಐತಿಹ್ಯಗಳಿವೆ. ಜತೆಗೆ ಅಲ್ಲಿರುವ ಕೆಂಪೇಗೌಡನ ಹಜಾರವಂತೂ ತುಂಬಾ ಪ್ರಸಿದ್ಧವಾದುದಾಗಿದೆ. ಅಲ್ಲಿನ ಒಂದು ಕಂಬದ ಮೇಲಿರುವ ಉಬ್ಬುಶಿಲ್ಪವನ್ನು ಕೆಲವರು ಅದು ಕೆಂಪೇಗೌಡನದೇ ಚಿತ್ರ ಎಂದು ಇತಿಹಾಸಕಾರರು ಪ್ರಾಚ್ಯವಸ್ತು ಇಲಾಖೆಯವರು ಗುರುತಿಸಿದ್ದಾರೆ.

ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ(ಬೆಟ್ಟದ ಎದುರಿಗೆ ಕೆನರಾ ಬ್ಯಾಂಕ್ ಇದೆ ಅದರ ಹಿಂಭಾಗದಲ್ಲಿ ಕಲ್ಯಾಣಿಯಿದೆ, ಅದರ ಸುತ್ತಲೂ ನೂರೆಂಟು ಲಿಂಗಗಳ ಸಂಕಿರ್ಣವಿದೆ).

ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠವಿದೆ. ಮತ್ತೆ ಈ ಕ್ಷೇತ್ರದಲ್ಲಿ ಮೂರು ಕಾರ್ಯನಿರತವಾಗಿರುವ ಲಿಂಗಾಯತ ಮಠಗಳಿವೆ ಅವುಗಳೆಂದರೆ ಹೊನ್ನಮ್ಮ ಗವಿಮಠ, ಮೇಲನ ಗವಿಮಠ, ಲಕ್ಷ್ಮೀ ಪೀಠ ಈ ಶಿವಗಂಗೆ ಕ್ಷೇತ್ರದಲ್ಲಿ ಇವೆ.

ತಿಗಳ ಜನಾಂಗದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ , ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ. ಬೆಟ್ಟದ ಬುಡದಲ್ಲಿ ಮನೆಗಳು ಅಂಗಡಿಗಳು ಹೋಟೆಲುಗಳಿವೆ ಮತ್ತು ಧರ್ಮಛತ್ರಗಳು ಸಮುದಾಯ ಭವನಗಳಿವೆ. ಎದುರಿಗೆ ಕೆನರಾ ಬ್ಯಾಂಕ್ ಇದೆ ಹಣದ ಅವಶ್ಯಕತೆ ಇದ್ದವರು ಎಟಿಎಂ ಮೊರೆ ಹೋಗಬಹುದು.

ವಿಶೇಷ_ಮಾಹಿತಿ

ಪ್ರತಿ ತಿಂಗಳ ಹುಣ್ಣಿಮೆ(ಪೌರ್ಣಮಿ)ಯ ಮುಂಜಾನೆ 4ಘಂಟೆಯ ನಂತರ ಬೆಟ್ಟವನ್ನು ಒಂದು ಸುತ್ತು ಪ್ರದಕ್ಷಿಣೆಯನ್ನು ಭಕ್ತಾದಿಗಳು ಹಾಕುವರು. ಇದಕ್ಕೆ ಯಾವುದೇ ಶುಲ್ಕಗಳಿಲ್ಲ ಹಾಗೂ ಯಾರಾದರೂ ಸಹ ಯಾವುದೇ ನೊಂದಣಿಯಿಲ್ಲದೆ ತಮ್ಮ ಇಚ್ಛೆಯನುಸಾರ ಪ್ರದಕ್ಷಿಣೆ ಹಾಕಬಹುದು, ಪ್ರದಕ್ಷಿಣೆ ಹಾಕುವ ಭಕ್ತಾದಿಗಳು ಸಂಘವನ್ನು ಸ್ಥಾಪಿಸಿ ಸದಸ್ಯತ್ವವನ್ನು ಮಾಡಿಕೊಂಡಿದ್ದಾರೆ. ಇಲ್ಲಿನ ಪ್ರಧಾನ ಅರ್ಚಕರು ಉತ್ತರ ಭಾರತದ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸವನ್ನು ಬಾಡಿಗೆ ಲೆಕ್ಕದಲ್ಲಿ ಕರೆದುಕೊಂಡು ಹೋಗುವರು.

ಸ್ಥಳೀಯ ಹಿರಿಯರು ಈ ಕ್ಷೇತ್ರವನ್ನು ಉತ್ತರ ಭಾರತದ ಕಾಶಿವಿಶ್ವನಾಥನಿಗಿಂತ ಈ ಕ್ಷೇತ್ರ ಒಂದು ಗುಲಗಂಜಿ ತೂಕ ಈ ಕ್ಷೇತ್ರ ಹೆಚ್ಚು ಎನ್ನುತ್ತಾರೆ ಈ ಮಾತಿನ ಅರ್ಥ ಏನೆಂದರೆ ಕಾಶಿಗಿಂತ ಹೆಚ್ಚು ಪುಣ್ಯ ಲಭಿಸುವ ಕ್ಷೇತ್ರ ಎಂದರ್ಥ. 

ಶಿವಗಂಗೆಯ_ವಿಷೇಶತೆ:

ಶಿವಗಂಗೆ ಬೆಟ್ಟದ ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ , ದಕ್ಷಿಣಕ್ಕೆ ಲಿಂಗಾಕೃತಿ , ಪಶ್ಚಿಮಕ್ಕೆ ಗಣಪತಿ , ಉತ್ತರಕ್ಕೆ ಸರ್ಪದ ಆಕೃತಿಯಂತೆ ಕಾಣುತ್ತದೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಮುಕ್ತಿ ಪಡೆದ ಸಂಗತಿ ಕ್ರಿ.ಶ.1131 ರ ಶ್ರಾವಣ ಬೆಳಗೊಳದ ಶಾಸನದಲ್ಲಿ ಉಲ್ಲೇಖವಾಗಿದೆ. ಇನ್ನೊಂದು ಮಾಹಿತಿಯ ಪ್ರಕಾರ ಶಾಂತಲೆಯು ಬೆಟ್ಟದ ಮೇಲಿಂದ ಬಿದ್ದು ಆತ್ಮಹತ್ಯೆಯು ಮಾಡಿಕೊಂಡಳೆಂದು ಹೇಳಲಾಗುತ್ತಿದೆ ಶಾಂತಲೆ ಬಿದ್ದ ಬೆಟ್ಟದ ಒಂದು ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದು ಕರೆಯುವರು.

ಪುರಾಣ

ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು . ಅದನ್ನು ಕಂಡ ಮುನಿಗಳು ‘ ಶಿವಗಂಗಾ ’ ಎಂದರು. ಅದೇ ಶಿವಗಂಗೆ ಕ್ಷೇತ್ರ ಆಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ .

ಇತಿಹಾಸ

9 ಮತ್ತು 10 ಶತಮಾನದಲ್ಲಿ ಶಿವಗಂಗೆ ಚೋಳರ ವಶದಲ್ಲಿತ್ತಾದರು ಇಲ್ಲಿ ಚೋಳರ ಯಾವುದೇ ದೇವಸ್ಥಾನ ಶಾಸನಗಳಿಲ್ಲ, ಆದರೆ 11 ಮತ್ತು 12ನೇ ಶತಮಾನದಲ್ಲಿ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಾಗ ವಿಷ್ಣುವರ್ಧನನು ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದಾನೆ ಎಂದು ಶಾಸನಗಳಿಂದ ತಿಳಿದು ಬರುತ್ತದೆ. ವಿಷ್ಣುವರ್ಧನನ ಪಟ್ಟದರಸಿ ಶಾಂತಲೆ ಬೆಟ್ಟದ ಮೇಲಿಂದ ಕೆಳಕ್ಕೆ ಬಿದ್ದು ದೇಹತ್ಯಾಗ ಮಾಡದ್ದು ಇದೆ ಶಿವಗಂಗೆ ಬೆಟ್ಟದಲ್ಲಿ ಎಂದು ಶ್ರವಣಬೆಳಗೊಳದ ಶಾಸನದಿಂದ ತಿಳಿದು ಬರುತ್ತದೆ, ಆ ಸ್ಥಳವನ್ನು ಈಗ ಶಾಂತಲಾ ಡ್ರಾಪ್ ಎಂದು ಹೆಸರಿಸಿ ಕರೆಯಲಾಗುತ್ತಿದೆ.

ವಿಷ್ಣುವರ್ಧನನ ಪಟ್ಟದರಸಿ ಶಾಂತಲೆಯು ಕ್ರಿ.ಶ.1131ರಲ್ಲಿ ಮರಣ ಹೊಂದಿದ್ದು, ಈ ಶಾಂತಲೆಯ ಸ್ಥಾನಮಾನ ಅವಳ ನಂತರ ಬಮ್ಮಲದೇವಿಗೆ ದೊರೆಯಿತು. ಈ ಬಮ್ಮಲದೇವಿ ರಾಣಿ ಕಲ್ಕಣಿನಾಡಿಗೆ ಸೇರಿದ ನಾಗಮಂಗಲದ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದಳೆಂದು ನಾಗಮಂಗಲದ ಶಂಕರನಾರಯಣ ದೇವಸ್ಥಾನದ ಶಾಸನದಿಂದ ತಿಳಿಯುತ್ತದೆ.

ಹೊಯ್ಸಳರ ನಂತರ 16ನೇ ಶತಮಾನದಲ್ಲಿ ವಿಜಯನಗರದ ಆಳ್ವಿಕೆಗೆ ಒಳಪಟ್ಟಿತ್ತು ಈ ಶಿವಗಂಗೆಯ ಉಸ್ತುವಾರಿಯನ್ನು ವಿಜಯನಗರದ ಸಾಮಂತರಾಜ ಶಿವಪ್ಪ ನಾಯಕನಿಗೆ ವಹಿಸಿದ್ದರು ಆಗ ಇದು ಶಿವಪ್ಪ ನಾಯಕ ಕೋಟೆ ಎಂದಾಗಿತ್ತು, ಆನಂತರ ಬೆಂಗಳೂರು ನಿರ್ಮಾತೃ ಹಿರಿಯ ಕೆಂಪೇಗೌಡ 1510 ರಿಂದ 1578 ರವರೆಗೆ 68 ವರ್ಷಗಳ ಕಾಲ ಆಳಿದ ಮಾಗಡಿ ಕೆಂಪೇಗೌಡರಿಗೆ ನೀಡಲಾಯಿತು. ಮಾಗಡಿ ಕೆಂಪೇಗೌಡರು ಈ ಶಿವಗಂಗೆ ಕ್ಷೇತ್ರದ ಮೇಲೆ ವಿಶೇಷವಾದ ಒಲವು ಹೊಂದಿದ್ದರೆಂದು ಅಲ್ಲಿನ ಶಾಸನಗಳು ಮತ್ತು ಶಿಲ್ಪಕಲೆಗಳು ವಿವರಿಸುತ್ತವೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಶಾಲಿವಾಹನ ಶಕ (ಕ್ರಿಸ್ತ ಶಕ)1550 ರಲ್ಲಿ ಶಿವಗಂಗೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಮೇಲೆ ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ಕಡಿದಾದ ಎತ್ತರವಾದ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು.ದೇವಾಲಯದ ಹಜಾರಗಳನ್ನು ನಿರ್ಮಿಸಿದ್ದಾರೆ. ಆ ಪ್ರದೇಶದಲ್ಲಿ ಬೀಳುವ ಮಳೆನೀರನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಮಳೆಕೊಯ್ಲು ತಂತ್ರಜ್ಞಾನದ ವ್ಯವಸ್ಥೆಯೂ ಆಯಿತು. ಅದು ಪವಿತ್ರ ಶೈವ ಕ್ಷೇತ್ರವಾಗುವಂತೆ ಶ್ರಮಿಸಿದ್ದು ಕೆಂಪೇಗೌಡರು. ಅದು ಈಗ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಸಂಗಮವಾಗಿ ಹೆಸರಾಗಿದೆ.

ತಮ್ಮ ಕುಲಕ್ಕೆ ಒಳ್ಳೆಯದಾಗಲಿ ಎಂಬ ಹರಕೆಯ ಭಾವನೆಯಿಂದ ಶಿವಗಂಗೆಯ ಗಂಗಾಧರೇಶ್ವರ ದೇಗುಲಕ್ಕೆ ಕೊಟ್ಟಿರುವ ದೊಡ್ಡಗಂಟೆಯ ಮೇಲಿನ ಶಾಸನದಲ್ಲಿ 

ಕೆಂಪನಾಚಯ_ಗವುಡರ_ಮಗ_ಕೆಂಪೇಗವುಡ ಎಂದು ಸ್ಪಷ್ಟವಾಗಿ ನಮೂದಾಗಿದೆ.

ಅಲ್ಲದೆ, ಇಲ್ಲಿ ಹಿರಿಯ ಕೆಂಪೇಗೌಡನ ಒಂದು ಪ್ರತಿಮೆಯೂ ಇದೆ. ಇದನ್ನು ಸ್ಥಾಪಿಸಿದ್ದು ಬೆಂಗಳೂರಿನ ಜನಕ ಕೆಂಪೇಗೌಡನ ಮಗನಾದ ಇಮ್ಮಡಿ ಕೆಂಪೇಗೌಡ. ಈ ಪ್ರತಿಮೆಯ ಮೇಲೆ 

ಬೆಂಗಳೂರ_ಕೆಂಪನಾಚಯಗವುಡರ_ಕುಮಾರ_ಕೆಂಪಯಗೌಡರ_ಶೇವೆ ಎಂದಿದೆ. 

ಇದಲ್ಲದೆ ಕೆಂಪೇಗೌಡ ಶಿವಗಂಗೆಯ ಗಂಗಾಧರೇಶ್ವರನ ಪರಮ ಭಕ್ತನಾಗಿದ್ದ. ಆ ದೇಗುಲವನ್ನು ಆತ ಒಂದು ನ್ಯಾಯಾಸ್ಥಾನ ಎಂದು ಪರಿಗಣಿಸಿದ ಬಗ್ಗೆ ಐತಿಹ್ಯಗಳಿವೆ. ಜತೆಗೆ ಅಲ್ಲಿರುವ ಕೆಂಪೇಗೌಡನ ಹಜಾರವಂತೂ ತುಂಬಾ ಪ್ರಸಿದ್ಧವಾದುದಾಗಿದೆ. ಅಲ್ಲಿನ ಒಂದು ಕಂಬದ ಮೇಲಿರುವ ಉಬ್ಬುಶಿಲ್ಪವನ್ನು ಕೆಲವರು ಅದು ಕೆಂಪೇಗೌಡನದೇ ಚಿತ್ರ ಎಂದು ಗುರುತಿಸಿದ್ದಾರೆ. ಇದುವರೆಗೂ ಶಿವಗಂಗೆಗೆ ಸಂಬಂಧಪಟ್ಟ ಕೆಂಪೇಗೌಡನ ಅಧಿಕೃತ 3 ಶಾಸನಗಳು ಸಿಕ್ಕಿವೆ. ಆದರೆ, ಈಗ್ಗೆ 2 ವರ್ಷಗಳ ಹಿಂದೆ ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಕೆಂಪೇಗೌಡನ ಸಮಾಧಿ ಶಾಸನ ಸಿಕ್ಕಿದೆ. ಇದನ್ನು ಪತ್ತೆ ಹಚ್ಚಿದವರೆಂದರೆ ಇತಿಹಾಸ ಸಂಶೋಧಕರಾದ ಪ್ರಶಾಂತ್‌ ಮರೂರು ಎಂಬುವರು ಅದರಮೇಲೆ ಕೆತ್ತಲಾದ ಶಾಸನ ಒಂದಿದೆ 

ಕುಣಿಗಲಿನಿಂದ_ಬಂದು_ಜಗಳವನು_ಮಾಡಿ_ಕೈಲಾಸಕ್ಕೆ_ಪೋದ_ಸ್ಥಳ 

ಎಂದು ಸ್ಪಷ್ಟವಾಗಿ ಓದಬಹುದಾಗಿದೆ. ಆದರೆ, ಕೆಂಪೇಗೌಡನು ಕೆಂಪಾಪುರದಲ್ಲಿ ಕೊನೆಯುಸಿರೆಳೆದನಾದರೂ ಆತ ತನ್ನ ಕೊನೆಯ ದಿನಗಳನ್ನು ಶಿವಗಂಗೆಯಲ್ಲಿ ಕಳೆದಿರ ಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 
ಇಂದಿಗೂ ಕೆಂಪೇಗೌಡ ವಂಶಸ್ಥರು ಇದ್ದಾರೆ, ಹೊಸಕೋಟೆಯ ಪ್ರಭಾವಿ ಬಿಜೆಪಿ ರಾಜಕಾರಣಿ ಬಿ‌.ಎನ್.ಬಚ್ಚೆಗೌಡರವರು ಕೆಂಪೇಗೌಡ ವಂಶಸ್ಥರು ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೆ ಸಾವಿರ ಮತಗಳ ಅಂತರದಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ಸೋಲುಂಡಿದ್ದನ್ನು ಸ್ಮರಿಸಬಹುದು.

ವಿಜಯನಗರದ ಅರಸರಿಂದ ಶಿವಗಂಗೆ ಮೈಸೂರು ಅರಸರ ವಶವಾದ ನಂತರ ಚಿಕ್ಕದೇವರಾಯನ ಕಾಲದಲ್ಲಿ ಕಳಲೆಯ ನಂಜರಾಜನೆಂಬ ಒಬ್ಬ ದಳವಾಯಿ ಕವಿಯೂ ಸಹ ಆಗಿದ್ದನು ಶಾಲಿವಾಹನ ಶಕ(ಕ್ರಿಸ್ತ ಶಕ)1740ರಲ್ಲಿ ಅನೇಕ ಕನ್ನಡ ಕೃತಿಗಳನ್ನು ಬರೆದಿದ್ದಾನೆ. ಇವುಗಳಲ್ಲಿ ಹಲವು ಸ್ಥಳ ಪುರಾಣಗಳ ಮಹಾತ್ಮೆಗಳನ್ನು ಬರೆದು ತಿಳಿಸಿದ್ದಾನೆ ಗರಳಪುರಿ, ಕಾಶಿ, ಭದ್ರಗಿರಿ, ಕಕ್ಕುದ್ಗಿರಿ(ದಕ್ಷಿಣ ಕಾಶಿ ಶಿವಗಂಗೆ) ಮೊದಲಾದ ಪುಣ್ಯಸ್ಥಳಗಳ ಮಹಿಮೆಯನ್ನು ಪ್ರಶಂಸಿಸುವ ಕಾವ್ಯಗಳು ಈ ಸೇನಾನಿಯ ಹೆಸರಿನಲ್ಲಿ ಪ್ರಸಿದ್ದವಾಗಿವೆ. ಈತನ ಕಾವ್ಯದಲ್ಲಿ ಶಿವಗಂಗೆ ಕ್ಷೇತ್ರವನ್ನು ಕಕ್ಕುದ್ಗಿರಿ ಎಂದು ಹೆಸರಿಸಿದ್ದಾನೆ.

ಹಲವು ಅಚ್ಚರಿಯ ಸಂಗತಿಗಳನ್ನು ಈ ಬೆಟ್ಟ ಹೊಂದಿದೆ. ಅದರಲ್ಲಿ ಒಂದು ಬೆಟ್ಟದ ತುದಿಯಲ್ಲಿ­ರುವ ಬೆಳ್ಳಿ ಗಂಟೆ. ಈ ಗಂಟೆ ಸಮರ್ಪಿಸಿದವರು ಕೆಂಪೇ ಗೌಡ. ಚಿನ್ನದ ಗಂಟೆಯು ಬೆಟ್ಟದ ಕಡಿದಾದ ಬೃಹತ್ ಬಂಡೆಯ ಕಲ್ಲಿಗೆ ಅಳವಡಿಸಲಾಗಿತ್ತು ಆದರೆ ಹೀಗೆ ಸುಮಾರು 30 ವರ್ಷದ ಹಿಂದೆ ಕಳ್ಳರು ಕದ್ದಿದ್ದಾರೆ.
16 ನೇ ಶತಮಾನದಲ್ಲಿ ಗಂಗಾಧರೇಶ್ವರ ದೇವಾಲಯದ ನವರಂಗದ ಸಿಂಹದ್ವಾರ ನಿರ್ಮಿಸಲಾಯಿತು. ಇದೇ ಕಾರಣಕ್ಕೆ, ಈ ಬಾಗಿಲುವಾಡದ ಕೆಳಗಡೆ ಕೆಂಪೇಗೌಡ, ಆತನ ಪತ್ನಿ, ಪುತ್ರ ಪುತ್ರಿಯರ ಉಬ್ಬು ಶಿಲೆಗಳಿವೆ. ಶಿವಗಂಗೆ ಬೆಟ್ಟದ ಬುಡದಲ್ಲಿ ರಾಯಗೋಪುರ (ಕೆಂಪೇಗೌಡ ಗೋಪುರ) ಮತ್ತು ಬೆಟ್ಟದ ಮೇಲೆ “ಕೆಂಪೇಗೌಡ ಹಜಾರ” ನಿರ್ಮಾಣವಾಗಿದೆ.

ವಾರ ಪೂರ್ತಿ ದುಡಿದು ಮರಕಟ್ಟಿದ ಮನಸಿಗೆ ಮುದ ನೀಡುವ ಶಿವಗಂಗೆ ಒಂದು ದಿನದ ಪ್ರವಾಸಕ್ಕೆ ಯೋಗ್ಯವಾದ ಸ್ಥಳ ಬೆಂಗಳೂರು ಮತ್ತು ತುಮಕೂರಿನವರಿಗೆ ಹೇಳಿ ಮಾಡಿಸಿದಂತಿದೆ ದಕ್ಷಿಣ ಕಾಶಿ ಶಿವಗಂಗೆ ಕ್ಷೇತ್ರ.

ಮಾರ್ಗಸೂಚಿ:

ಬೆಂಗಳೂರಿನಿಂದ ಹೋಗುವವರು ಯಶವಂತಪುರದಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನೆಲಮಂಗಲ ಮುಖಾಂತರ ತುಮಕೂರು ರಸ್ತೆಯಲ್ಲಿ ಬಂದು ಡಾಬಸ್’ಪೇಟೆಗೆ ಫ್ಲೈಓವರ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿ ಹೋಗಿ ಶಿವಗಂಗೆ ಸರ್ಕಲ್ ನಲ್ಲಿ ಎಡಕ್ಕೆ 8 ಕಿಲೋಮೀಟರ್ ಸಾಗಿದರೆ ಶಿವಗಂಗೆ ತಲುಪುವಿರಿ.

ತುಮಕೂರಿನಿಂದ ಬರುವವರೂ ಸಹ ಡಾಬಸ್’ಪೇಟೆಗೆ ಬಂದು ಫ್ಲೈಓವರ್ ಕೆಳಗೆ ಸರ್ವೀಸ್ ರಸ್ತೆಯಲ್ಲಿ ಬಂದು ಶಿವಗಂಗೆ ಸರ್ಕಲ್ ನಲ್ಲಿ ಬಲಕ್ಕೆ ತಿರುಗಿ 8 ಕಿಲೋಮೀಟರ್ ಪ್ರಯಾಣಿಸಿದರೆ ಶಿವಗಂಗೆ ತಲುಪ
ಬಹುದು.

ರಾಮನಗರ ಮಾಗಡಿಯಿಂದ ಬರುವವರು ಮಾಗಡಿಯಿಂದ ಬಾಲಾಜಿ ಚಿತ್ರಮಂದಿರದ ರಸ್ತೆಯಲ್ಲಿ ಗುಡೇಮಾರನಹಳ್ಳಿಗೆ ಬಂದು ರಾಷ್ಟ್ರೀಯ ಹೆದ್ದಾರಿ ಸರ್ಕಲ್ ನಲ್ಲಿ ನೇರವಾಗಿ ಹಾಗೆ ಮುಂದೆ ಗೊರೂರು ಮುಖಾಂತರ ಶಿವಗಂಗೆಗೆ ತಲುಪಬಹುದು.

ಬೆಂಗಳೂರಿನಿಂದ ಶಿವಗಂಗೆಗೆ ಗೂಗಲ್ ನಕಾಶೆ
ಬೆಂಗಳೂರಿನಿಂದ ಶಿವಗಂಗೆಗೆ ಗೂಗಲ್ ನಕಾಶೆ

ಬೆಂಗಳೂರಿನಿಂದ ಶಿವಗಂಗೆಗೆ ಗೂಗಲ್ ನಕಾಶೆ ಲಿಂಕ್ ನೀಡಲಾಗಿದೆ ಲಿಂಕ್ ಅನ್ನು ಕ್ಲಿಕ್ ಮಾಡಿ  https://maps.app.goo.gl/q7zM5bsnfDTzKum78

Open Timings:

  • Monday to Sunday: – 6:00 am to 7:00 pm

Interesting Facts and Things to do in ಶಿವಗಂಗೆ ಬೆಟ್ಟ (Shivagange)

ಶಿವಗಂಗೆ ಬರುತಿದ್ದಂತೆ ಸ್ವಾಗತಿಸುವ ಶಿವಗಂಗೆ ನಾಮ ಫಲಕ
ಶಿವಗಂಗೆ ಬರುತಿದ್ದಂತೆ ಸ್ವಾಗತಿಸುವ ಶಿವಗಂಗೆ ನಾಮ ಫಲಕ

ಶಿವಗಂಗೆ ಬರುತಿದ್ದಂತೆ ಸ್ವಾಗತಿಸುವ ಶಿವಗಂಗೆ ನಾಮ ಫಲಕ, ಇಲ್ಲಿ ನೀವು ಗೊಂದಲಕ್ಕೀಡಾಗಬಹುದು ಅರೇ ಇದೇನಿದು ಕೊರಟಗೆರೆ ಬಳಿ ಶಿವಗಂಗೆ ಬೆಟ್ಟ ಇದೆಯೇ ಎಂದು ಇದು ತುಮಕೂರು ಜಿಲ್ಲೆಯ ತಾಲ್ಲೂಕು ಕೊರಟಗೆರೆಯಲ್ಲ ಬದಲಿಗೆ ಮತ್ತೊಂದು ಕೊರಟಗೆರೆ ಎಂಬ ಗ್ರಾಮ ಒಂದಿದೆ ಇದನ್ನು “ಚಿಕ್ಕ ಕೊರಟಗೆರೆ” ಎನ್ನುವರು ಈ ಚಿಕ್ಕಕೊರಟಗೆರೆಯಲ್ಲಿ ಆದಿಶಕ್ತಿ ಕೆಂಪಮ್ಮನ ದೇವಸ್ಥಾನ ಹೆಚ್ಚು ಪ್ರಸಿದ್ಧ ಹೊಂದಿದೆ ಹಲವು ಮನೆ ವಂಶಸ್ಥರ ಕುಲದೇವತೆಯಾಗಿದ್ದಾಳೆ.

ಬೆಟ್ಟದ ಕೆಳಗಿನಿಂದ ನೋಡಿದರೆ ಕಾಣುವ ಸುಂದರ ಶಿವಗಂಗೆ ಬೆಟ್ಟ
ಬೆಟ್ಟದ ಕೆಳಗಿನಿಂದ ನೋಡಿದರೆ ಕಾಣುವ ಸುಂದರ ಶಿವಗಂಗೆ ಬೆಟ್ಟ

ಬೆಟ್ಟದ ಕೆಳಗಿನಿಂದ ನೋಡಿದರೆ ಕಾಣುವ ಸುಂದರ ಶಿವಗಂಗೆ ಬೆಟ್ಟ ಸಮುದ್ರ ಮಟ್ಟದಿಂದ 1380 ಮೀಟರ್ ಎತ್ತರವಿದೆ. ಈ ಬೃಹತ್ ಬೆಟ್ಟವನ್ನು ಹತ್ತುವುದು ಪ್ರವಾಸಿಗರಿಗೆ ಒಂದು ಚಾಲೆಂಜ್, ಹೆಚ್ಚು ಭಕ್ತರು, ಪ್ರವಾಸಿಗರು, ವೃದ್ದರು ಮತ್ತು ಮಕ್ಕಳು ಬೆಟ್ಟದ ಪ್ರಸಿದ್ಧ ಸ್ಥಳವಾದ ಒಳಕಲ್ಲು ತೀರ್ಥದ ವರೆಗೂ ಹೋಗಿ ಹಿಂದಿರುಗುವರು.

ಶಿವಗಂಗೆ ಬೆಟ್ಟವನ್ನು ಹತ್ತುವ ದ್ವಾರ
ಶಿವಗಂಗೆ ಬೆಟ್ಟವನ್ನು ಹತ್ತುವ ದ್ವಾರ

ಬೆಟ್ಟವನ್ನು ಹತ್ತುವ ದ್ವಾರ: ಗೋಪುರದ ಕೆಳಗಿನಿಂದ ಬೆಟ್ಟದ ಮೇಲೆ ಹತ್ತಬೇಕು. ಎದುರಿಗೆ ಹೊಸದಾಗಿ ಕಟ್ಟಿದ ಶಿವನ ವಿಗ್ರಹವಿದೆ.

ಶಿವಗಂಗೆ ಬೆಟ್ಟ ಕಡಿದಾದ ಬಂಡೆ ಹತ್ತಲು ಮೆಟ್ಟಿಲು
ಶಿವಗಂಗೆ ಬೆಟ್ಟ ಕಡಿದಾದ ಬಂಡೆ ಹತ್ತಲು ಮೆಟ್ಟಿಲು

ಶಿವಗಂಗೆ ಬೆಟ್ಟ ಕಡಿದಾದ ಬಂಡೆಯನ್ನು ಹತ್ತಲು ಮೆಟ್ಟಿಲು ಮಾಡಲಾಗಿದೆ

ಶಿವಗಂಗೆ ಬೆಟ್ಟ ಹತ್ತಲು ಸಹಾಯವಾಗಲೆಂದು ನಿರ್ಮಿಸಿರುವ ಸಂಕೀರ್ಣ
ಶಿವಗಂಗೆ ಬೆಟ್ಟ ಹತ್ತಲು ಸಹಾಯವಾಗಲೆಂದು ನಿರ್ಮಿಸಿರುವ ಸಂಕೀರ್ಣ

ಬೆಟ್ಟ ಹತ್ತಲು ಸಹಾಯವಾಗಲೆಂದು ನಿರ್ಮಿಸಿರುವ ಸಂಕೀರ್ಣ

ಬೆಟ್ಟದ ಮೇಲಿಂದ ಕಾಣುವ ಸುಂದರ ನೋಟ
ಬೆಟ್ಟದ ಮೇಲಿಂದ ಕಾಣುವ ಸುಂದರ ನೋಟ

ಬೆಟ್ಟದ ಮೇಲಿಂದ ಕಾಣುವ ಸುಂದರ ನೋಟ

ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥದ ಹೊರಗಿನ ನೋಟ
ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥದ ಹೊರಗಿನ ನೋಟ

ಒಳಕಲ್ಲು ತೀರ್ಥದ ಹೊರಗಿನ ನೋಟ.
ಒಳಕಲ್ಲು ತೀರ್ಥಕ್ಕೆ ಹೋಗಲು ಒಳಗೆ ಗುಹೆಯಿದೆ 5 ರುಪಾಯಿಯ ಟಿಕೆಟ್ ಪಡೆಯಬೇಕು ನಂತರ ಗುಹೆಯಲ್ಲಿ ತೆವಳುತ್ತ ಬಗ್ಗಿ ಸಾಗಬೇಕು

ಶಿವಗಂಗೆ ಬೆಟ್ಟದ ಗುಹೆಯೊಳಗಿನ ವೀರಭದ್ರೇಶ್ವರ ದೇವಸ್ಥಾನ
ಶಿವಗಂಗೆ ಬೆಟ್ಟದ ಗುಹೆಯೊಳಗಿನ ವೀರಭದ್ರೇಶ್ವರ ದೇವಸ್ಥಾನ

ಗುಹೆಯೊಳಗಿನ ವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿಯೇ ಒಳಕಲ್ಲು ತೀರ್ಥವಿರುವುದು.

ಒಳಕಲ್ಲು ತೀರ್ಥ... ಅಂತರಗಂಗೆ ಶಿವಗಂಗೆ
ಒಳಕಲ್ಲು ತೀರ್ಥ… ಅಂತರಗಂಗೆ ಶಿವಗಂಗೆ

ಇದು ಒಳಕಲ್ಲು ತೀರ್ಥ… ಅಂತರಗಂಗೆ ಎಂದು ಕರೆಸಿಕೊಳ್ಳುವ ಇದನ್ನು ಶಿವಯೋಗಿ ಜಗದ್ಗುರು ಎಡಿಯೂರು ಸಿದ್ಧಲಿಂಗೇಶ್ವರರ ಗುರುಗಳಾದ ರೇವಣ್ಣ ಸಿದ್ದೇಶ್ವರರು (ರಾಮನಗರದ ರೇವಣ್ಣ ಸಿದ್ದೇಶ್ವರ ಬೆಟ್ಟ SRS Hill ದಲ್ಲಿ ನೆಲೆಯೂರಿರುವ) ಬಂಡೆಯೊಳಗಿಂದ ನೀರು ಹೊರತೆಗೆದರು ಎಂದು ಪುರಾಣದ ಕಥೆಯೊಂದರಲ್ಲಿ ಹೇಳಲಾಗಿದೆ. ಪುರಾಣದಲ್ಲಿ ಉಲ್ಲೇಖಿಸಿದಂತೆ ಇಲ್ಲಿ ಬಂಡೆಯೊಳಗಿನಿಂದ ನೀರು ಹರಿಯುತ್ತದೆ. ಇದು ಒರಳುಕಲ್ಲು(ಆಡುಭಾಷೆಯಲ್ಲಿ ಒಳಕಲ್ಲು ಎನ್ನುವರು) ಆಕಾರದಲ್ಲಿರುವುದರಿಂದ ಒಳಕಲ್ಲು ಎನ್ನುವರು. ಇದು ಬೆಟ್ಟದ ಮಧ್ಯ ಭಾಗದಲ್ಲಿದೆ.

ಭಕ್ತಾದಿಗಳು ಇಷ್ಟಾರ್ಥಗಳನ್ನು ಮನಸ್ಸಲ್ಲಿ ಬೇಡಿಕೊಂಡು ಇದರೊಳಗೆ ಕೈ ಹಾಕುವರು, ಕೈ ಹಾಕಿದಾಗ ನೀರು ಸಿಕ್ಕಿದರೆ ಅದೃಷ್ಟ ಮತ್ತು ಬೇಡಿದ ಇಷ್ಟಾರ್ಥಗಳು, ಕಾರ್ಯಗಳು ನೆರವೇರುತ್ತವೆ ಎಂಬ ಬಲವಾದ ನಂಬಿಕೆ ಇದೆ ಭಕ್ತರಲ್ಲಿ.

ಶಿವಗಂಗೆ ಬೆಟ್ಟದಿಂದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುರಂಗಮಾರ್ಗ
ಶಿವಗಂಗೆ ಬೆಟ್ಟದಿಂದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುರಂಗಮಾರ್ಗ

ಕೆಂಪೇಗೌಡರು ಈ ಶಿವಗಂಗೆ ಬೆಟ್ಟವನ್ನು ವಶಪಡಿಸಿಕೊಂಡ ನಂತರ ಬಹಳಷ್ಟು ದೈವಿಕವಾಗಿ ಅಭಿವೃದ್ಧಿ ಪಡಿಸಿದರು, ಆಗ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದ ಕ್ಷೇತ್ರವು ಸಹ ಕೆಂಪೇಗೌಡರ ಅದೀನದಲ್ಲಿತ್ತು ಆಗ ಶಿವಗಂಗೆಯ ಈ ಚಿತ್ರದಲ್ಲಿರುವ ಸ್ಥಳದಿಂದ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುರಂಗಮಾರ್ಗವು ಕೊರೆಸಿದ್ದರು, ಇದೆ ಈ ಚಿತ್ರದಲ್ಲಿರುವ ಸುರಂಗದ ಬಾಗಿಲು.

ಗವಿಗಂಗಾಧರೇಶ್ವರ ದೇವಸ್ಥಾನ ಶಿವಗಂಗೆ ಬೆಟ್ಟದ ತುದಿ
ಗವಿಗಂಗಾಧರೇಶ್ವರ ದೇವಸ್ಥಾನ ಶಿವಗಂಗೆ ಬೆಟ್ಟದ ತುದಿ

ಬೆಟ್ಟದ ತುದಿಗೆ ಹತ್ತಿ ತಲುಪಿದರೆ ಗವಿಗಂಗಾಧರೇಶ್ವರ ದೇವಸ್ಥಾನವಿದೆ ಇದರ ಹಿಂದೆಯೇ ಶಾಂತಲಾ ಡ್ರಾಪ್ ಇರುವುದು.

ಶಿವಗಂಗೆ ಶಿವನ ದೇವಾಲಯದ ಆಧಾರ ಸ್ತಂಭದ ಅದ್ಭುತವಾದ ಕೆತ್ತನೆ
ಶಿವಗಂಗೆ ಶಿವನ ದೇವಾಲಯದ ಆಧಾರ ಸ್ತಂಭದ ಅದ್ಭುತವಾದ ಕೆತ್ತನೆ

ಶಿವನ ದೇವಾಲಯದ ಆಧಾರ ಸ್ತಂಭದ ಅದ್ಭುತವಾದ ಕೆತ್ತನೆಯನ್ನು ಗಮನಿಸಿ ಅವರು ಕಲೆಗೆ ಎಷ್ಟು ಬೆಲೆ ಕೊಡುತ್ತಿದ್ದರು ಅಂತ.

ಶಿವಗಂಗೆ ಬೆಟ್ಟದ ಮೇಲಿನ ಕುಂಬಾವತಿ ತೀರ್ಥ ಪಾತಾಳಗಂಗೆ
ಶಿವಗಂಗೆ ಬೆಟ್ಟದ ಮೇಲಿನ ಕುಂಬಾವತಿ ತೀರ್ಥ ಪಾತಾಳಗಂಗೆ

ಈ ಬೆಟ್ಟದ ಮೇಲಿನ ಕುಂಬಾವತಿ ತೀರ್ಥ ಇದನ್ನು ಹೆಚ್ಚಾಗಿ ಪಾತಾಳಗಂಗೆ ಎಂದೆ ಭಕ್ತರು ಕರೆಯುತ್ತಾರೆ…
ಇಂತಹ ದೇವಸ್ಥಾನದಗಳಲ್ಲಿ ಉದ್ಬವವಾಗುವ ನೀರನ್ನು ದೇವರ ತೀರ್ಥವೆಂದು ಕರೆಯುವರು ಹೀಗೆ ಉದ್ಬವವಾಗುವ ನೀರಲ್ಲಿ ಅನೇಕ ರೋಗ-ರುಜಿನಗಳು ವಾಸಿಯಾಗುವಂತಹ ಔಷಧೀಯ ಗುಣಗಳಿರುತ್ತವೆ ಎಂಬುದು ಭಕ್ತರ ನಂಬಿಕೆ ಇದು ದೇವರ ಮಹಿಮೆಯೋ ಅಥವಾ ಇಲ್ಲಿ ಉದ್ಭವಿಸುವ ನೀರಲ್ಲಿ ಇಂತಹ ಶಕ್ತಿ ಇದೆಯೋ ಅದೆಲ್ಲ ತರ್ಕಕ್ಕೆ ನಿಲುಕದ್ದು ಆದರೆ ದೇವರ ಹೆಸರಲ್ಲಿ ತೆಗೆದುಕೊಳ್ಳುವ ಇಂತಹ ಉದ್ಬವ ತೀರ್ಥದಲ್ಲಿ ಭಕ್ತರು ಪರಿಹಾರ ಕಂಡುಕೊಳ್ಳುವುದು ಗಮನಾರ್ಹ ಸಂಗತಿ.
ಇಂತಹ ಇನ್ನೂ ಹಲವು ತೀರ್ಥಗಳು ಈ ಬೆಟ್ಟದಲ್ಲಿವೆ.

ಶಿವಗಂಗೆಯಲ್ಲಿ ಒಟ್ಟು ಹತ್ತು ತೀರ್ಥ ಕ್ಷೇತ್ರಗಳಿವೆ ಒಂದೊಂದು ತೀರ್ಥಗಳಿಗೂ ಪ್ರತ್ಯೇಕ ಹೆಸರುಗಳಿವೆ
ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ, ಮೈತ್ಲಾ ತೀರ್ಥ, ಪಾತಾಳಗಂಗೆ, ಒಳಕಲ್ಲು(ಒರಳುಕಲ್ಲು)ತೀರ್ಥ, ಕಪಿಲತೀರ್ಥ, ಕುಂಬಾವತಿ ತೀರ್ಥಗಳು…
ಇದೇ ಕುಂಬಾವತಿ ತೀರ್ಥ ಈ ಕುಂಬಾವತಿ ತೀರ್ಥದಲ್ಲಿ ಹರಿದು ಬರುವ ನೀರನ್ನೇ ಗವಿ ಮಠದ ದಾಸೋಹಕ್ಕೆ ಬಳಸಲಾಗುತ್ತದೆ ಎಂಬುದು ಸಹ ವೈಜ್ಞಾನಿಕವಾಗಿ ಸಾಭೀತಾಗಿದೆ ಅಂದರೆ ಈ ಶಿವಗಂಗೆ ಬೆಟ್ಟದಲ್ಲಿ ಹರಿವ ನೀರಿನ ಪ್ರಮಾಣವನ್ನು ನೀವು ಅಂದಾಜಿಸಬಹುದು.

ಶಿವಗಂಗೆ ಪಾತಾಳ ಗಂಗೆಯ ಕಾವಲಿಗೆ ಇರುವ 9 ಅಡಿ ಎತ್ತರದ ವೀರಭದ್ರ
ಶಿವಗಂಗೆ ಪಾತಾಳ ಗಂಗೆಯ ಕಾವಲಿಗೆ ಇರುವ 9 ಅಡಿ ಎತ್ತರದ ವೀರಭದ್ರ

ಪಾತಾಳ ಗಂಗೆಯ ಕಾವಲಿಗೆ ಇರುವ 9 ಅಡಿ ಎತ್ತರದ ವೀರಭದ್ರ.
ಇದು 12ನೇ ಶತಮಾನದಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನ ಕಾಲದಲ್ಲಿ ಕೆತ್ತಲ್ಪಟ್ಟಿದೆ ಎಡಭಾಗದಲ್ಲಿ ಕುರಿತಲೆಯಿರುವ ಕೆತ್ತನೆಯೊಂದಿದು ಇದು ಶಿವನ ಸತಿದೇವಿಯ ತಂದೆಯಾದ ದಕ್ಷಬ್ರಹ್ಮನ ಶಿಲ್ಪವಿದು.

ಶಿವಗಂಗೆ ಕೆಂಪೆಗೌಡನ ಖಜಾನೆ
ಶಿವಗಂಗೆ ಕೆಂಪೆಗೌಡನ ಖಜಾನೆ

ಇದು ಕೆಂಪೆಗೌಡನ ಖಜಾನೆ, ಕೆಂಪೆಗೌಡನ ಆಳ್ವಿಕೆಯಲ್ಲಿ ಈ ಕೊಠಡಿಯನ್ನು ಖಜಾನೆ ಮಾಡಿಕೊಂಡಿದ್ದರು. ಈ ಶಿವಗಂಗೆ ಮೇಲೆ ಕೆಂಪೇಗೌಡರಿಗೆ ವಿಶೇಷ ಒಲವಿತ್ತು ಮತ್ತು ಹಲವು ಬಾರಿ ಭೇಟಿ ನೀಡಿದ್ದನ್ನು ಶಾಸನಗಳಲ್ಲಿ ದಾಖಲಿಸಲಾಗಿದೆ.

ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಸುತ್ತು ಬಸವ
ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಸುತ್ತು ಬಸವ

ಬೆಟ್ಟದಲ್ಲಿ ಒಟ್ಟು ಎಂಟು ನಂದಿಯ ಶಿಲೆಗಳಿವೆ ಅದರಲ್ಲಿ ಇದು ಒಂದು ಇದು ತುತ್ತ ತುದಿಯಲ್ಲಿರುವ ಸುತ್ತೊ ಬಸವ ಅಥವಾ ಸುತ್ತು ಬಸವ ಎನ್ನುವರು. ಈ ನಂದಿಯನ್ನು ಪ್ರದಕ್ಷಿಣೆ ಹಾಕಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ.
ಮಕ್ಕಳಾಗದವರು ಮತ್ತು ಮದುವೆ ವಿಳಂಬವಾದವರು ಶೀಘ್ರ ವಿವಾಹ ಆಗಲೆಂದು ಬೇಡಿಕೊಳ್ಳುವವರು ನಂದಿಯನ್ನು ಪ್ರದಕ್ಷಿಣೆ ಹಾಕುವರು.

ಶಿವಗಂಗೆಯ ಸುಂದರ ನೋಟ
ಶಿವಗಂಗೆಯ ಸುಂದರ ನೋಟ
ಶಿವಗಂಗೆ ಚಿನ್ನದ ಘಂಟೆ ತೂಗು ಹಾಕಿದ ಬಂಡೆ
ಶಿವಗಂಗೆ ಚಿನ್ನದ ಘಂಟೆ ತೂಗು ಹಾಕಿದ ಬಂಡೆ

ಇದು ಚಿನ್ನದ ಘಂಟೆ ತೂಗು ಹಾಕಿದ ಬಂಡೆ ಆದರೆ ಇಂದು ಆ ಚಿನ್ನದ ಘಂಟೆ ನೆನಪಾಗಿ ಉಳಿದಿದೆ, ಕಾರಣ ಆ ಚಿನ್ನದ ಘಂಟೆಯನ್ನು ಹಲವು ವರ್ಷಗಳ ಹಿಂದೆಯೇ ಕಳ್ಳರು ಕದ್ದಿದ್ದಾರೆ. ಆ ಕಳ್ಳರ ಸುಳಿವು ಇದುವರೆಗೂ ಸಿಗದೆ ಹೋದದ್ದು ವಿಷಾದದ ಸಂಗತಿ.

ಶಿವಗಂಗೆ ಶಾಂತಲಾ ಡ್ರಾಪ
ಶಿವಗಂಗೆ ಶಾಂತಲಾ ಡ್ರಾಪ

ಹೊಯ್ಸಳರ ಪ್ರಮುಖ ರಾಜ ವಿಷ್ಣುವರ್ಧನನ ಮಡದಿ ಶಾಂತಲೆಗೆ ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ ಒಮ್ಮೆ ನನಗೆ ಇನ್ನೆಂದಿಗೂ ಮಕ್ಕಳಾಗವುದಿಲ್ಲ ಎಂದು ಬೇಸರದಿಂದ ಮನಸ್ಸನ್ನು ಗಟ್ಟಿಮಾಡಿಕೊಂಡು ಚಿತ್ರದಲ್ಲಿ ಕಾಣಿಸುವ ಬೆಟ್ಟದ ಅಂಚಿಗೆ ಬಂದು ಉಟ್ಟ ಸೀರೆಯ ಮಡಿಲಿನ ತುಂಬ ಅವರೆಕಾಳುಗಳನ್ನು ತುಂಬಿಕೊಂಡು ಈ ಬೆಟ್ಟದ ತುದಿಯಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶಾಂತಲೆ ಬಿದ್ದ ಆ ಸ್ಥಳದಲ್ಲಿ ಮಳೆಗಾಲದಲ್ಲಿ ಇಂದಿಗೂ ಅವರೆ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿವೆ.

LEAVE A REPLY

Please enter your review
Please enter your name here